ಕಾಸಲ್, ಆಲ್ಬ್ರೆಕ್ಟ್

1853-1927. ಜರ್ಮನಿಯ ಜೀವರಸಾಯನ ಶಾಸ್ತ್ರಜ್ಞ. ನೊಬೆಲ್ ಪಾರಿತೋಷಿಕ ವಿಜೇತ (1960). ಸ್ವಿಟ್ಜರ್ಲೆಂಡಿನ ರಾಸ್ಟಾಕ್‍ನಲ್ಲಿ ಜನಿಸಿದ. ತೌರೂರಿನ ಜಿಮ್ನಾಷಿಯಂನಲ್ಲಿ ಶಿಕ್ಷಣ ಪಡೆದ. ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಆಧುನಿಕ ಜೀವರಸಾಯನಶಾಸ್ತ್ರಜ್ಞರಲ್ಲೊಬ್ಬನಾದ ಫೆಲಿಕ್ಸ್ ಹಾಪ್-ಸೀಲರ್ ಎಂಬಾತ ಈತನಿಗೆ ಗುರುವಾಗಿದ್ದ. ಡಾಕ್ಟರ್ ಆಫ್ ಮೆಡಿಸನ್ ಪದವಿಯನ್ನು ಪಡೆದ ಮೇಲೆ (1878) ಹಾಪ್-ಸೀಲರ್ ಮತ್ತು ಬರ್ಲಿನಿನ ಶರೀರ ಶಾಸ್ತ್ರ ಸಂಸ್ಥೆಯ ಇ.ಡ್ಯು ಬಾಯ್ಸ್ ರೇಮಂಡರ ನೇತೃತ್ವದಲ್ಲಿ ಕೆಲಸ ಮಾಡಿದ. ಅನಂತರ ಬರ್ಲಿನಿನ ಶರೀರಶಾಸ್ತ್ರ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ನಿರ್ದೇಶಕನಾಗಿ ನೇಮಕಗೊಂಡ (1895). 1901ರ ವರೆಗೂ ಇದೇ ಹುದ್ದೆಯಲ್ಲಿ ಮುಂದುವರಿದ. ಇದೇ ಸಂದರ್ಭದಲ್ಲಿ ಹೈಡಲ್‍ಬರ್ಗ್‍ನಲ್ಲಿ ಇಂಥದ್ದೇ ಹುದ್ದೆಗೆ ಬಂದ ಆಮಂತ್ರಣವನ್ನು ಅಂಗೀಕರಿಸಿ ತನ್ನ ಕೊನೆಯ ಕಾಲದವರೆಗೆ ಅದೇ ಹುದ್ದೆಯಲ್ಲಿ ಇದ್ದ. ಮರಣಕ್ಕೆ ಮೊದಲು ಈತನಿಗೆ ಹೈಡಲ್‍ಬರ್ಗ್‍ನ ಎಮೆರಿಟಸ್ ಪ್ರಾಧ್ಯಾಪಕನ ಗೌರವವೂ (1901-23) ಹೈಡಲ್‍ಬರ್ಗ್‍ನ ಸಂಸ್ಥೆಯ ನಿರ್ದೇಶಕನ ಸ್ಥಾನಗೌರವವೂ ದೊರಕಿದುವು. ಶರೀರಶಾಸ್ತ್ರ ಸಂಬಂಧವಾದ ಪತ್ರಿಕೆಯೊಂದಕ್ಕೆ 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಪಾದಕನಾಗಿದ್ದ. ಈತನ ಅನೇಕ ಸಂಶೋಧನ ಪ್ರಬಂಧಗಳು ಈ ಪತ್ರಿಕೆಯಲ್ಲಿ ಪ್ರಕಟವಾದುವು. ಜೀವಂತಕೋಶಗಳ ರಸಾಯನಶಾಸ್ತ್ರದ ಬಗೆಗಿನ ಸಮಸ್ಯೆಗಳ ಸ್ಪಷ್ಟನೆಯಲ್ಲಿ ಸಾವಯುವ ರಸಾಯನಶಾಸ್ತ್ರ ವಿಧಾನಗಳನ್ನು ಅನ್ವಯ ಮಾಡಿದವರಲ್ಲಿ ಈತ ಮೊದಲಿಗ. ಈತನ ಸಂಶೋಧನೆಗಳು ಮುಖ್ಯವಾಗಿ ನ್ಯೂಕ್ಲಿಯಿಕ್ ಆಮ್ಲಗಳ ಮೇಲೆ ನಡೆದುವು. ನ್ಯೂಕ್ಲಿಯಿಕ್ ವಸ್ತುಗಳನ್ನೊಳಗೊಂಡಂತೆ ಪ್ರೋಟೀನುಗಳ ಮೇಲೆ ಸಂಶೋಧನೆ ನಡೆಸಿ ಅದರಿಂದ ಜೀವಕೋಶ ರಸಾಯನಶಾಸ್ತ್ರದ ಮೇಲೆ ಬೆಳಕು ಚೆಲ್ಲಿದ ಕಾರಣದಿಂದಾಗಿ ಈತನಿಗೆ ನೊಬೆಲ್ ಪಾರಿತೋಷಿಕ ದೊರಕಿತು. ಅಡೆನಿನ್ ಮತ್ತು ಥಯಮಿನ್‍ಗಳನ್ನು ಕಂಡುಹಿಡಿದ ಖ್ಯಾತಿ ಈತನದು. ಈತ ಹೈಡಲ್‍ಬರ್ಗ್‍ನಲ್ಲೇ ಕಾಲವಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ